ಗಾಂಧಾರಿ : ಮಹಾಭಾರತ ಮಹಾಕಾವ್ಯದ ಪ್ರಮುಖರಲ್ಲೊಬ್ಬಳು. ಧೃತರಾಷ್ಟ್ರನ ಪತ್ನಿ. ದುರ್ಯೋಧನಾದಿಗಳ ತಾಯಿ. ಮಗಳು ದುಶ್ಯಲೆ. ನೂರು ಜನ ಶೂರರ ತಾಯಿಯಾದರೂ ಅವರ ದುಷ್ಟತನದಿಂದ ದುಃಖಶತಜನನಿ ಎಂಬ ಹೆಸರಿಗೆ ಪಕ್ಕಾದವಳು. ವ್ಯಾಸರ ದಿವ್ಯ ಕೂರ್ಚಿಕೆ ಇವಳನ್ನು ಉಜ್ವಲ ವರ್ಣಗಳಲ್ಲಿ ಚಿತ್ರಿಸಿವೆ. ಧರ್ಮದೇವತೆಯೆಂದು ಪ್ರಾಜ್ಞರು ಈಕೆಯನ್ನು ಕೈವಾರಿಸಿರುವರು. ಭಾರತದಲ್ಲಿ ತಮ್ಮ ಪಾತಿವ್ರತ್ಯದಿಂದ ತ್ಯಾಗತಪಗಳಿಂದ ಆದರ್ಶಪ್ರಾಯರಾಗಿರುವ ಸತೀಶಿರೋಮಣಿಯರಲ್ಲೀಕೆ ಅಪುರ್ವಳು.
ಗಾಂಧಾರಿ ಗಾಂಧಾರ ದೇಶದ ಸುಬಲ ರಾಜನ ಕುಮಾರಿ. ಪರಮಚತುರನಾದ ಶಕುನಿ ಇವಳ ಸೋದರ. ಬಾಲ್ಯದಲ್ಲಿಯೇ ಈಶ್ವರನನ್ನು ಕುರಿತು ತೀವ್ರವಾಗಿ ತಪಸ್ಸುಮಾಡಿ ನೂರು ಜನ ಗಂಡುಮಕ್ಕಳಾಗುವಂತೆ ವರ ಪಡೆದಳು. ಇವಳ ಇಂಥ ಪುಣ್ಯವನ್ನೂ ಸದ್ಗುಣಗಳನ್ನೂ ಕೇಳಿ ತಿಳಿದ ಕುರುಕುಲಪಿತಾಮಹ ಗಾಂಗೇಯ ಧೃತರಾಷ್ಟ್ರನಿಗಾಗಿ ಈಕೆಯನ್ನು ಸುಬಲ ರಾಜನಲ್ಲಿ ಯಾಚಿಸಿದ. ಈಕೆಯ ಪುಣ್ಯದಿಂದಲಾದರೂ ಕುರುವಂಶದಲ್ಲಿ ನಿಯೋಗ ಪದ್ಧತಿ ತಪ್ಪಿ ಔರಸ ಸಂತಾನ ಸಂಪತ್ತು ಅಭಿವೃದ್ಧಿಗೊಳ್ಳಲಿ ಎಂಬುದು ಆ ಮಹಾಪ್ರಾಜ್ಞನ ಆಶಯ.
ಸುಬಲನಿಗಾದರೂ ಪ್ರಸಿದ್ಧವಾದ ಕುರುವಂಶದೊಡನೆ ಸಂಬಂಧ ಬೆಳೆಸುವ ಆಸೆಯಾದರೂ ಧೃತರಾಷ್ಟ್ರ ಹುಟ್ಟುಕುರುಡನೆಂಬ ಹಿಂಜರಿಕೆ ಇತ್ತು. ಹೇಗಾದರೂ ಆತನ ವಂಶವಿಭವ ಸಂಪತ್ತು ಅಧಿಕಾರಿಗಳಿಗೆ ಮನಸೋತು ಆ ಮೂಲಕ ತನ್ನ ಗೌರವ ಘನತೆಗಳು ಬೆಳೆಯುವವೆಂದು ಆಶಿಸಿ ಆ ಸಂಬಂಧ ಬೆಳೆಸಲು ಒಪ್ಪಿದ. ತಂದೆ ತನ್ನನ್ನು ಒಬ್ಬ ಜನ್ಮಾಂಧ ರಾಜಕುವರನಿಗೆ ಕೊಡಲಿರುವುದನ್ನು ತಿಳಿದರೂ ಗಾಂಧಾರಿ ಅದರ ವಿರುದ್ಧ ಒಂದು ಮಾತನ್ನೂ ಆಡಲಿಲ್ಲ. ಅದಕ್ಕೆ ಪ್ರತಿಯಾಗಿ ಮಂಟಪಕ್ಕೆ ಬರುವ ಮುನ್ನ ದಪ್ಪನಾದೊಂದು ಬಟ್ಟೆಯಿಂದ ತನ್ನ ಕಣ್ಣುಗಳನ್ನು ಕಟ್ಟಿಕೊಂಡು ತಾನೂ ನಯನವಿಹೀನೆಯಾದಳು. ಇದನ್ನು ಕಂಡ ವ್ಯಾಸ ಮಹರ್ಷಿಗಳು ಈಕೆಯನ್ನು ಪಾತಿವ್ರತ್ಯಪರಾಯಣಳೆಂದರು. ಇವಳ ಲೋಕೋತ್ತರವಾದ ಪತಿಭಕ್ತಿ ತ್ಯಾಗಶಕ್ತಿಗಳನ್ನು ಕಂಡು ಹಸ್ತಿನಾವತಿಯೇ ಕೈಮುಗಿಯಿತು.
ಈಕೆಗೆ ತನ್ನ ಮಕ್ಕಳಲ್ಲಿ ಹೇಗೊ ಹಾಗೆಯೇ ಪಾಂಡುಪುತ್ರರಲ್ಲೂ ಅಕ್ಕರೆ. ದ್ರೌಪದಿಯ ಸ್ವಯಂವರಾನಂತರ ಆಸ್ಥೆಯಿಂದ ಕೃಷ್ಣೆಯನ್ನು ಮನೆ ತುಂಬಿಕೊಂಡು ಉಪಚರಿಸಿದಳು. ಸುಂದರಿಯಾದ ಹೊಸ ಸೊಸೆಯನ್ನು ಅಧರ್ಮಿಗಳಾದ ತನ್ನ ಮಕ್ಕಳಿಂದ ದೂರವಿಟ್ಟು ಕಾಪಾಡುವ ಜಾಗ್ರತೆಯನ್ನೂ ತೋರಿದಳು.
ಕ್ರಮೇಣ ತನ್ನ ಮಕ್ಕಳಿಗೆ ಪಾಂಡವರಲ್ಲಿ ಬೆಳೆಯುತ್ತಿದ್ದ ಹಗೆಯನ್ನು ಗುರುತಿಸಿ ಅದನ್ನು ತಡೆಯಲು ಪ್ರಯತ್ನಿಸಿ ವಿಫಲಳಾದಾಗ ತುಂಬ ಕೊರಗಿದಳು.
ಸಂಧಾನಕ್ಕಾಗಿ ಆಗಮಿಸಿದ ಕೃಷ್ಣ ಪಾಂಡವರಿಗೆ ಅರ್ಧ ರಾಜ್ಯವನ್ನು ಕೊಡಬೇಕೆಂದು ಕೇಳಿದಾಗ, ಕರ್ಣ ದುಶ್ಯಾಸನ ಶಕುನಿ ಮುಂತಾದ ಸುಯೋಧನನ ಪಕ್ಷದವರಿಗೂ ಭೀಷ್ಮ ದ್ರೋಣ ವಿದುರ ಮುಂತಾದ ನ್ಯಾಯನಿಷ್ಠರಾದ ವೃದ್ಧರಿಗೂ ಬಿರುಸಿನ ಚರ್ಚೆಯಾಗುತ್ತದಷ್ಟೆ. ಪಾಂಡವರು ಅರ್ಧರಾಜ್ಯಕ್ಕೆ ಹಕ್ಕುದಾರರೆಂದು ಹಿರಿಯರೆಲ್ಲರ ವಾದವನ್ನು ಗಾಂಧಾರಿ ಅನುಮೋದಿಸಿ ಧರ್ಮಜ್ಞಾ ದೂರದರ್ಶಿನಿ ಎಂಬ ವ್ಯಾಸಸ್ತುತಿಗೆ ತಕ್ಕವಳಾಗುತ್ತಾಳೆ. ‘ಇದು ಪಾಂಡುವಿನ ರಾಜ್ಯ. ಧೃತರಾಷ್ಟ್ರ ಹುಟ್ಟುಕುರುಡನಾದುದರಿಂದ ಅವನಿಗೆ ರಾಜ್ಯದ ಹಕ್ಕೇ ಹುಟ್ಟಲಿಲ್ಲ. ಅವನ ಮಕ್ಕಳಾದ ಪಾಂಡವರೇ ಇದಕ್ಕೆಲ್ಲ ನಿಜವಾದ ವಾರಸುದಾರರು. ಆದ್ದರಿಂದ ಅರ್ಧ ರಾಜ್ಯವನ್ನಲ್ಲ, ಸಂಪುರ್ಣ ರಾಜ್ಯವನ್ನೂ ದುರ್ಯೋಧನ ಧರ್ಮಪುತ್ರನಿಗೆ ಒಪ್ಪಿಸತಕ್ಕದ್ದು’ ಎಂಬುದು ಈಕೆಯ ಅಭಿಮತ.
ಗಾಂಧಾರಿ ಎಂಥ ದೀರ್ಘದರ್ಶಿನಿ ಮತ್ತು ಮಹಾಪ್ರಜ್ಞಳು ಎಂಬುದು ಆಕೆ ಮಗನಿಗೆ ಮಾಡುವ ಉಪದೇಶದಿಂದ ಚೆನ್ನಾಗಿ ತಿಳಿಯುತ್ತದೆ. ಅರ್ಥ ಗಾಂಭೀರ್ಯ ದಿಂದ ಉನ್ನತ ಭಾವಗಳಿಂದ ಕೂಡಿದ ಆಕೆಯ ಉಕ್ತಿಗಳು ಆಕೆಯ ಅಂತರ್ದೃಷ್ಟಿಯನ್ನು ವ್ಯಕ್ತಪಡಿಸುತ್ತವೆ. ಹಠಮಾರಿಯಾದ ಮಗನಿಗೆ ಈಕೆ ಹೇಳುವ ಬುದ್ಧಿವಾದವಿದು: ‘ಸಿಟ್ಟಿನ ಕೈಯಲ್ಲಿ ಬುದ್ಧಿಯನ್ನು ಕೊಟ್ಟು ನೀನು ಹೋರಾಟಕ್ಕೆ ನಿಂತೆಯಾದರೆ ಭೀಷ್ಮ ದ್ರೋಣ ಕೃಪ ಕರ್ಣ ಭೀಮಸೇನ ಧನಂಜಯ ಧೃಷ್ಟದ್ಯುಮ್ನ ಮುಂತಾದವರೆಲ್ಲರ ಉಗ್ರಾಸ್ತ್ರಗಳ ಅಮೋಘವರ್ಷದಿಂದ ಇಡಿಯ ಭೂಮಂಡಲವೆಲ್ಲ ನಾಶವಾಗುವುದು. ನಿನ್ನೊಬ್ಬನ ಕಾರಣದಿಂದ ವಂಶವೂ ಪ್ರಜೆಗಳೂ ನಾಶವಾಗುವುದಕ್ಕಿಂತ ಬೇರೆ ಅನರ್ಥ ವಿದೆಯೇ? ಬಲಿಷ್ಠರಾದ ಆ ಪಾಂಡವರನ್ನು ಮಣಿಸಲು ನೀನು ನಂಬಿ ಕುಳಿತ ಕರ್ಣನಾಗಲೀ ಶೀಘ್ರಕೋಪಿಯಾದ ದುಶ್ಯಾಸನನಾಗಲೀ ಶಕ್ತರಲ್ಲ. ನಿಜವಾಗಿ ಹಾಗೆ ಮಾಡಲು ಸಮರ್ಥ ರಾದವರು ಭೀಷ್ಮ ದ್ರೋಣ ಕೃಪಾದಿಗಳು. ಆದರೆ ಕೈಯಾರೆ ಸಾಕಿದ ಮೊಮ್ಮಕ್ಕಳನ್ನು ತಾತನಾಗಲೀ ವಿದ್ಯೆಯೂಡಿದ ಗುರುವಾಗಲೀ ಕೊಂದಾರೆಂದು ನೀನೆಣಿಸಬೇಡ. ಆ ವೃದ್ಧವೀರರು ನಿನ್ನ ಅನ್ನದ ಋಣಕ್ಕಾಗಿ ನಿನ್ನ ಕಡೆ ನಿಂತು ಯುದ್ಧ ಮಾಡುವರು. ಆ ತಬ್ಬಲಿಗಳಾದ ಪಾಂಡುಪುತ್ರರನ್ನು ಕೊಲ್ಲುವುದರ ಬದಲು ಆನಂದದಿಂದ ಅವರೆಲ್ಲ ಜೀವವನ್ನೇ ಬಿಟ್ಟಾರು. ಆದ್ದರಿಂದ ಮಗು ನೀನೀಗ ಹದಿಮೂರು ವರ್ಷ ಅವರಿಗೆ ಮೋಸಮಾಡಿ ರಾಜ್ಯವಾಳಿದ್ದೀಯೆ, ಈಗ ಅವರು ಬದುಕಿ ಉಳಿದಿರುವುದೇ ಹೆಚ್ಚು. ನನ್ನ ಹೊಟ್ಟೆಯ ಪುಣ್ಯ. ಇನ್ನೂ ಅತಿಯಾಸೆ ಮಾಡಬೇಡ. ಅವರ ಅರ್ಧರಾಜ್ಯವನ್ನು ಅವರಿಗೆ ಕೊಟ್ಟುಬಿಡು. ನಿನಗೂ ನಿನ್ನ ಮಂತ್ರಿ ಮಿತ್ರರಿಗೂ ಸುಖವಾಗಿ ಉಂಡು ಗೌರವದಿಂದ ಬಾಳಲು ವಿಶಾಲವಾದ ಕುರುರಾಜ್ಯದ ಅರ್ಧಭಾಗವೇನೂ ಕಡಿಮೆಯಿಲ್ಲ. ಅತ್ಯಾಸೆಯಿಂದ ಸ್ವಾಭಿಮಾನಿ ಗಳೂ ಶೂರರೂ ಸಂಯಮಿಗಳೂ ಜನಪ್ರಿಯರೂ ಆದ ಪಾಂಡವರ ವಿರುದ್ಧ ಯುದ್ಧವನ್ನು ಹೂಡಬೇಡ. ಅವರ ಜೊತೆಗೆ ಯುದ್ಧವೆಂದರೆ ನಿನಗೆ ಸುಖಭ್ರಂಶ, ಆತ್ಮಧ್ವಂಸ.’
ತನ್ನ ಮಾತಿಗೆ ಕಿವಿಗೊಡದೆ ಉತ್ಕಟ ದುರಭಿಮಾನದಿಂದ ಪಾಂಡವದ್ವೇಷವನ್ನು ಸಾಧಿಸಲು ದುರ್ಯೋಧನ ಮುಂದಾದಾಗ ಗಾಂಧಾರಿ ಅವನಿಗೆ ಬೆಂಬಲ ಕೊಟ್ಟ ಧೃತರಾಷ್ಟ್ರನನ್ನು ಚೇಡಿಸುತ್ತಾಳೆ. ‘ಇಂಥ ಅಯೋಗ್ಯನಿಗೆ ರಾಜ್ಯವನ್ನು ಒಪ್ಪಿಸಿದ್ದೇ ಮಹಾಪರಾಧ. ಇಲ್ಲಿ ತಪ್ಪು ಮೊದಲು ನಿನ್ನದಿದ್ದು ಈ ವಿಷಯದಲ್ಲಿ ಪುತ್ರಲಂಪಟನಾದ ನಿನ್ನನ್ನೇ ಬೈಯಬೇಕಾಗಿದೆ. ಏಕೆಂದರೆ ಅವನ ಈ ದೌರ್ಜನ್ಯವನ್ನು ತಿಳಿದೂ ಮತ್ತೆ ನೀನು ಅವನ ಬೆನ್ನುಹತ್ತುವೆ’ ಎಂದು ಆಕ್ಷೇಪಿಸುತ್ತಾಳೆ.
ಇಡೀ ಭಾರತದಲ್ಲಿ ಹೀಗೆ ದೂರದೃಷ್ಟಿಯುಳ್ಳ ತರ್ಕಬುದ್ಧಿಯ, ಧ್ಯೇಯ ನಿಷ್ಠ ವ್ಯಕ್ತಿಗಳು ಕಾಣುವುದು ಅಪೂರ್ವ. ಅಲ್ಲಲ್ಲಿ ಹರಡಿಕೊಂಡಿರುವ ಗಾಂಧಾರಿಯ ಮಾತುಕಥೆಗಳನ್ನೆಲ್ಲ ಕ್ರೋಢೀಕರಿಸಿ ವಿಚಾರಮಾಡಿದರೆ ಹಲವು ಅರ್ಥ ಮತ್ತು ನೀತಿ ಶಾಸ್ತ್ರಗ್ರಂಥಗಳ ಸಾರವೇ ಅಲ್ಲಿ ಎರಕ ಹೊಯ್ದಂತೆ ಘನೀಭವಿಸುವುದು ಕಂಡುಬರುತ್ತದೆ. ಅವಳ ಲೋಕಾನುಭವ, ಮಾನವೀಯ ಹೃದಯಪರೀಕ್ಷಣೆ, ಸರ್ವಂಕಷ ಪ್ರತಿಭೆ, ನೀತಿ, ಪ್ರೀತಿ ಎಲ್ಲವೂ ಅವಳ ವಚೋವಿಸ್ತಾರದಲ್ಲಿ ನಿಚ್ಚಳವಾಗಿ ಮೂಡಿ ಬಂದಿದೆ.
ಅವಳ ಹೆಣ್ಣು ಹೃದಯದ ಭಾವ ಕೋಮಲತೆಯನ್ನೂ ಪ್ರೇಮಲ ಸ್ವಭಾವವನ್ನೂ ಹಲವು ಸನ್ನಿವೇಶಗಳಲ್ಲಿ ಕಾಣುತ್ತೇವೆ.
ರಾಜಸಭೆಯಲ್ಲಿ ದುರ್ಯೋಧನಾದಿಗಳು ದ್ರೌಪದಿಯನ್ನು ಅವಮಾನಗೊಳಿಸಲು ಯತ್ನಿಸಿದಾಗ ಅವಳ ಗೋಳಿನಿಂದ ನೊಂದ ಗಾಂಧಾರಿ ಕ್ರುದ್ಧಳಾಗಿ ‘ಹುಟ್ಟಿದಾಗಲೇ ಕತ್ತೆಯಂತೆ ಕೂಗಿದ ಈ ದುಷ್ಟಪುತ್ರನನ್ನು ಕುಲನಾಶಕನನ್ನು ವಿದುರನ ಮಾತಿನಂತೆ ನಾವು ತ್ಯಜಿಸಲಿಲ್ಲವೇಕೆ?’ ಎಂದು ಮರಗುತ್ತಾಳೆ; ‘ಈಗಲೂ ಕುಲಘಾತಕನಾದ ಈ ಪುತ್ರನನ್ನು ಹೊರಗಟ್ಟಿಬಿಡು’ ಎಂದು ಧೃತರಾಷ್ಟ್ರನಿಗೆ ಹೇಳುತ್ತಾಳೆ. ಇದರಿಂದ ಎಚ್ಚೆತ್ತ ಧೃತರಾಷ್ಟ್ರ ದುರ್ಯೋಧನನ ಅವಿವೇಕಕ್ಕೆ ತಡೆಹಾಕುತ್ತಾನೆ.
ಮುಂದೆ ಮಹಾಯುದ್ಧದಲ್ಲಿ ತನ್ನ ಐವರು ಮಕ್ಕಳನ್ನೂ ಕಳೆದುಕೊಂಡು ಗೋಳಿಡುವ ಕೃಷ್ಣೆಯನ್ನು ಕಂಡು ತನ್ನ ಎದೆಯಲ್ಲಿ ನೂರು ಅಗ್ನಿಕುಂಡಗಳು ಉರಿಯುತ್ತಿದ್ದರೂ ಗಾಂಧಾರಿ ಸಮಾಧಾನಪಡಿಸುತ್ತಾಳೆ: ‘ನೂರು ಮಂದಿ ಮಕ್ಕಳನ್ನು ನುಂಗಿ ಕುಳಿತ ನನ್ನನ್ನು ನೋಡಿ ನಿನ್ನ ದುಃಖವನ್ನು ತಡೆದುಕೊ ಮಗುವೆ, ಸಮಾಧಾನ ತಂದುಕೊ’ ಎನ್ನುವ ಇವಳ ಸಾಂತ್ವನ ವಚನ ಇವಳ ಹೃದಯದ ಔದಾರ್ಯವನ್ನು ಪರದುಃಖಕಾತರತೆಯನ್ನು ತೋರುತ್ತದೆ.
ಗಾಂಧಾರಿಯ ತೇಜವೂ ತಪಶ್ಯಕ್ತಿಯೂ ಅಷ್ಟೇ ಉಜ್ವಲವಾದುವು. ಯುದ್ಧಾನಂತರದಲ್ಲಿ ನಮಿಸಲು ಬಂದ ಧರ್ಮಪುತ್ರನನ್ನು ಸ್ಪರ್ಶಿಸಿದ ಇವಳ ಕಣ್ಣಂಚಿನ ಕಿರಣವೇ ಅವನಿಗೆ ಸಾಕಷ್ಟು ಘಾಸಿಯನ್ನು ಮಾಡುತ್ತದೆ; ಅವನ ಪಾದಗಳ ಉಗುರು ಸೀದು ಕಪ್ಪಿಡುತ್ತದೆ.
ಇನ್ನು ಈ ಸಾಧ್ವಿಯ ನುಡಿಯಾದರೋ ಕಿಡಿಯಾಗಿ ಹಣೆಯ ಬರೆಹವನ್ನು ತಿದ್ದುವ ಸಾಮರ್ಥ್ಯವನ್ನು ಪಡೆದಿತ್ತು. ಅದನ್ನು ಅರಿತ ದುರ್ಯೋಧನ ಯುದ್ಧದಲ್ಲಿ ಕೈಗಟ್ಟಿದ ಇವಳ ಆಶೀರ್ವಾದವನ್ನು ಬಯಸುತ್ತಾನೆ. ಆದರೆ ನ್ಯಾಯನಿಷ್ಠರಳಾದ ಆ ಮಹಾಮಾತೆ ಧರ್ಮಕ್ಕೆ ಜಯವಾಗಲಿ ಎನ್ನುತ್ತಾಳೆ.
ತೊಂಬತ್ತೊಂಬತ್ತು ಜನ ತಮ್ಮಂದಿರ ಅನಂತರ ತೊಡೆಮುರಿದು ನೆಲಕ್ಕೆ ಒದಗಿದ ದುರ್ಯೋಧನನ್ನು ಕಂಡು ಗಾಂಧಾರಿಯ ಕೋಮಲ ಹೃದಯ ಗೋಳಿಡುತ್ತದೆ. ‘ಅಂಥ ವಿಭವಶಾಲಿಯಾದ ನೀನು, ನಾಯಿ, ನರಿಗಳ ಆಹಾರವಾಗಿ ಭೂಶಾಯಿಯಾ ದೆಯಾ’-ಎಂದು ಹಲಬುತ್ತಾಳೆ. ಕಪಟದಿಂದ ಪಾಂಡವರನ್ನು ಪಾಲಿಸಿ ಕೌರವರನ್ನು ನಿರ್ಮೂಲ ಮಾಡಿದ ದೈವದ ಮೇಲೆ ಮುನಿಯುತ್ತಾಳೆ. ಈಕೆಯ ತಪಶ್ಯಕ್ತಿಯನ್ನರಿತ ವಾಸುದೇವ ತಾನೇ ಬಂದು ಮುಂದೆ ನಿಂತು ಶಪಿತನಾಗಿ ಇವಳ ಕ್ರೋಧದಿಂದ ಇತರರನ್ನು ರಕ್ಷಿಸುತ್ತಾನೆ.
‘ನೀನು ಇಚ್ಛಿಸಿದ್ದರೆ ಕೌರವರೂ ಬಾಳುತ್ತಿದ್ದರು. ಬೇಕೆಂದೇ ನೀನವರನ್ನು ಉಪೇಕ್ಷಿಸಿ ನಾಶಮಾಡಿದೆ. ಅದರ ಫಲವಾಗಿ ನನ್ನ ಶಾಪವನ್ನು ನೀನು ಅನುಭವಿಸು’ ಎನ್ನುತ್ತ ‘ನಿನ್ನ ಜಾತಿಬಾಂಧವರು ನಿನ್ನೆದುರಿಗೇ ಹೊಡೆದಾಡಿ ಸಾಯಲಿ. ಅನಾಥನಾಗಿ ನೀನು ಯಾರೂ ಅರಿಯದಂತೆ ಎಲ್ಲಿಯೋ ಬಿದ್ದು ಸಾಯಿ’ ಎಂದು ಗಾಂಧಾರಿ ಕೃಷ್ಣನನ್ನು ಶಪಿಸುತ್ತಾಳೆ.
ಹೀಗೆ ಮಹಾಭಾರತದುದ್ದಕ್ಕೂ ಗಾಂಧಾರಿಯ ಧರ್ಮಸಂಕಟದ ಪ್ರಸಂಗ ಬಹು ಉಜ್ವಲವಾಗಿ ಬಂದಿದೆ.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ